ಜಪಾನ್ ಮೆರುಗು -
ಲೋಹ ಮರ ಮೊದಲಾದವುಗಳಿಂದ ತಯಾರಿಸಿದ ವಸ್ತುಗಳ ಮೇಲ್ಮೈಗೆ ಮೆರುಗು ಕೊಡುವುದರಲ್ಲಿ ಅನುಸರಿಸುವ ಒಂದು ವಿಶಿಷ್ಟ ಕ್ರಮ; ಹೀಗೆ ಒಪ್ಪಮಾಡಿದ ವಸ್ತುಗಳು ಜಪಾನ್ ಅರಗು ಸಾಮಾನುಗಳಂತೆಯೇ ರಂಜಿಸುವುದರಿಂದ ಈ ಹೆಸರು ಬಂದಿದೆ (ಜಪಾನಿಂಗ್). ಜಪಾನ್ ಮೆರುಗು ಕಲೆ ಮೊದಲು ಆ ದೇಶದ ಉರು ಎಂಬ ಮರದಿಂದ ಉಂಟಾದ ಮೆರುಗೆಣ್ಣೆಯ ಪ್ರಯೋಗದಿಂದ ಪ್ರಾರಂಭವಾಯಿತಾದರೂ ಈಚೆಗೆ ಇದು ಅನೇಕ ದೇಶಗಳಲ್ಲಿ ಅನೇಕ ತರಹೆಯ ಮೆರುಗೆಣ್ಣೆಯ ಬಳಕೆಯಿಂದ ಪ್ರಸಿದ್ಧವಾಗಿದೆ. ಸ್ವಚ್ಛ ಪಾರದರ್ಶಕ ಮೆರುಗೆಣ್ಣೆಗಳೊಂದಿಗೆ ಕಪ್ಪು ಅಥವಾ ಸ್ಥಿರವಾದ ಖನಿಜ ಬಣ್ಣಗಳ ಮಿಶ್ರಣವನ್ನು ಜಪಾನ್ ಮೆರುಗು ಕ್ರಿಯೆಯಲ್ಲಿ ಬಳಸುತ್ತಾರೆ. ಉದಾಹರಣೆಗೆ ಅಗಸೆ ಎಣ್ಣೆಯೊಡನೆ ಮಿಶ್ರಿತವಾದ ಕಪ್ಪುರಾಳ ಮತ್ತು ಗೋಂದು. ಕೋಪಾಲ್ ವಾರ್ನಿಷ್ ಅನೇಕ ಕಡೆಗಳಲ್ಲಿ ಮೂಲಾಧಾರ ವಸ್ತುವಾಗಿರುವುದುಂಟು. ವಸ್ತುವಿನ ಹೊರಮೈಯ್ಯನ್ನು ಶುದ್ಧಗೊಳಿಸಿ ನುಣುಪಿಸಿ ಮೆರುಗೆಣ್ಣೆಯನ್ನು ಅದರ ಮೇಲೆ ಸವರಬೇಕು. ಬಳಿಕ ಅದನ್ನು ಕಾವಿನಿಂದ ಸಂಸ್ಕರಿಸಿ (ಕೆಲವು ವೇಳೆ 300ಈ ವರೆಗೂ) ನುಣುಪಿಸಿ ತಣಿಸಿ ಮುಂದಿನ ಲೇಪನವನ್ನು ಮಾಡಬೇಕು, ಈ ಪ್ರಕಾರ ಪದರ ಪದರವಾಗಿ ಒಪ್ಪಪಡೆದ ವಸ್ತು ತುಂಬ ಹೊಳಪಿನಿಂದಲೂ ಆಕರ್ಷಣೀಯವಾದ ಬಣ್ಣದಿಂದಲೂ ಕೂಡಿರುತ್ತದೆ. ಅಲ್ಲದೇ ಪರಿಸರದ ಉಣ್ಣತಾ ಏರುಪೇರುಗಳಿಂದಾಗಲಿ ತೇವದಿಂದಾಗಲಿ ಸಾಮಾನ್ಯವಾಗಿ ಇದು ಹಾಳಾಗುವುದಿಲ್ಲ. ಜಪಾನ್ ಮೆರುಗು ಕಲೆ ಬಣ್ಣಗಾರಿಕೆಯ ಮತ್ತು ಗಾಜುಲೇಪನದ ಮಧ್ಯವರ್ತಿ ಕಲೆ ಎನ್ನಬಹುದು. ಮುಖ್ಯವಾಗಿ ಕಬ್ಬಿಣದ ಸಾಮಾನುಗಳು ಕಬ್ಬಿಣದ ಗೃಹಸಲಕರಣೆಗಳು, ಕೈಪೆಟ್ಟಿಗೆಗಳು, ಗಡಿಯಾರಗಳ ಮುಖಫಲಕಗಳು, ಕಾಗದವನ್ನು ರುಬ್ಬಿ ಮಾಡಿದ ಸಾಮಾನುಗಳು-ಇವು ಜಪಾನ್ ಮೆರುಗಿಗೆ ಒಳಪಡುವ ಸಲಕರಣೆಗಳು.   					(ಕೆ.ಎಸ್.ಕೆ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ